ಫಾಲ್ಕೆ, ದಾದಾ ಸಾಹೇಬ	
1870-1944. ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಭಾರತೀಯ ಚಲನಚಿತ್ರದ ಪಿತಾಮಹನೆಂದು ಖ್ಯಾತರಾಗಿರುವ ಆದ್ಯ ಚಲನಚಿತ್ರೋದ್ಯಮಿ. ದಾದಾ ಸಾಹೇಬ ಎಂದು ಹೆಸರಾಗಿರುವ ಧುಂಡೀರಾಜ ಗೋವಿಂದ ಫಾಲ್ಕೆ ಹುಟ್ಟಿದ್ದು 1870ರ ಏಪ್ರಿಲ್ 30ರಂದು, ನಾಸಿಕದ ಬಳಿಯ ತ್ರಿಯಂಬಕೇಶ್ವರದ ವೈದಿಕ ಮನೆತನದಲ್ಲಿ. ತಂದೆಯಂತೆಯೇ ಸಂಸ್ಕøತ ವಿದ್ವಾಂಸರಾಗಲು ಅಗತ್ಯವಾದ ಶಾಸ್ತ್ರಾಧ್ಯನ ನಡೆಯಿತು. ಆದರೆ ಫಾಲ್ಕೆ ಅವರಿಗೆ ಕಲೆಯ ಬಗ್ಗೆ ಅಭಿರುಚಿ, ಒಲವು. ಬಾಲ್ಯದಿಂದಲೂ ಚಿತ್ರಕಲೆ, ಅಭಿನಯ ಹಾಗೂ ಯಕ್ಷಿಣಿ ಪ್ರದರ್ಶನಗಳಲ್ಲಿ ಅಪಾರ ಆಸಕ್ತಿ. ತಂದೆ ಮುಂಬಯಿಯ ಎಲ್‍ಫಿನ್‍ಸ್ಟನ್ ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆಗೆ ಸೇರಿದ ಮೇಲೆ ಮುಂಬಯಿಗೆ ಬಂದು ಅಲ್ಲಿ ಪ್ರೌಢ ಶಿಕ್ಷಣ ಮುಗಿಸಿ ನಗರದ ದೊಡ್ಡ ಕಲಾ ಸಂಸ್ಥೆಯಾಗಿದ್ದ ಜೆ. ಜೆ. ಕಲಾಶಾಲೆಯನ್ನು ಸೇರಿದರು. ಛಾಯಾಗ್ರಹಣವೂ ಸೇರಿದಂತೆ ವಿವಿಧ ಕಲೆಗಳಲ್ಲಿ ನೈಪುಣ್ಯ ಪಡೆದರು. ಈ ವೇಳೆಗಾಗಲೆ ಕುಶಲ ಯಕ್ಷಿಣಿಗಾರನೂ ಆದರು. ಬಡೋದೆಯ ಕಲಾಭವನದಲ್ಲಿ ಹೆಚ್ಚಿನ ತರಬೇತಿ ಪಡೆದು ಸರ್ಕಾರಿ ಪುರಾತತ್ವ ಇಲಾಖೆಯಲ್ಲಿ ಸ್ವಲ್ಪಕಾಲ ಛಾಯಗ್ರಾಹಕರಾಗಿದ್ದರು. ಆಮೇಲೆ ಸ್ವಂತ ಲಕ್ಷ್ಮೀ ಆರ್ಟ್ ಪ್ರಿಂಟಿಂಗ್ ವಕ್ರ್ಸ್ ಮುದ್ರಣಾಲಯವನ್ನು ತೆರೆದ. ವರ್ಣಮುದ್ರಣಕ್ಕೆ ಬರಬೇಕಾದ ತರಬೇತಿ ಹಾಗೂ ಸಲಕರಣೆಗಳಿಗೆಂದು 1909ರಲ್ಲಿ ಜರ್ಮನಿಗೆ ಹೋಗಿ ಬಂದ. ಹಿಂದಿರುಗಿದ ಮೇಲೆ ಮುದ್ರಣವೃತ್ತಿಯಲ್ಲಿ ಆಸಕ್ತಿ ಉಳಿದಿರಲಿಲ್ಲ. 1910ರ ಸುಮಾರಿಗೆ ರೋಗಗ್ರಸ್ತನಾದ. ಸ್ವಲ್ಪಕಾಲ ದೃಷ್ಟಿಮಂದವಾಯಿತು. ದೃಷ್ಟಿಸರಿಯಾದ ಮೇಲೆ ಆಗತಾನೆ ಕಾಲಿಡುತ್ತಿದ್ದ ಚಲನಚಿತ್ರ ವಲಯದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಲೈಫ್ ಆಫ್ ಕ್ರೈಸ್ಟ್ (ಡಿಸೆಂಬರ್ 10, 1910) ನೋಡಿದ. ಭಾರತೀಯ ಪುರಾಣಪುರುಷರನ್ನು ಆಧರಿಸಿ ಚಿತ್ರಗಳನ್ನು ಮಾಡುವ ಅಭಿಲಾಷೆ ಕಾಡಿತು. ಚಿತ್ರನಿರ್ಮಾಣಕ್ಕೆ ಬೇಕಾದ ಮಾಹಿತಿಗಳ ಆಳವಾದ ಅಧ್ಯಯನ ಮಾಡಿದರು. ನೆಂಟರಿಷ್ಟರ ವಿರೋಧವನ್ನೂ ಲೆಕ್ಕಿಸದೆ ಸಾಲಸಂಗ್ರಹಣೆ ಮಾಡಿದ್ದಲ್ಲದೆ ಸಲಕರಣೆ ಹಾಗೂ ಮಾರ್ಗದರ್ಶನಕ್ಕೆ ಇಂಗ್ಲೆಂಡಿಗೆ ಹೋಗಿಬಂದರು (1912). ಬಯೊಸ್ಕೋಪ್ ಎಂಬ ಚಿತ್ರ ವಾರಪ್ರತಿಕೆಯ ಸಂಪಾದಕ ಕ್ಯಾಬರೂನ್ ಹಾಗೂ ಬ್ರಿಟಿಷ್ ಚಿತ್ರೋದ್ಯಮದ ಆದ್ಯಪ್ರವರ್ತಕ ಹಾಗೂ ಚಿತ್ರ ನಿರ್ಮಾಪಕ ಸೆಸ್ಸಿಲ್ ಹೆಪ್‍ವರ್ತರನ್ನು ಭೆಟ್ಟಿಯಾಗಿ ಚಿತ್ರ ನಿರ್ಮಾಣದ ಬಗ್ಗೆ ಉಪಯುಕ್ತ ಸಲಹೆಪಡೆದ. ಮರಳಿ ಬಂದ ಬಟಾಣಿ ಸಸಿಯ ಬೆಳವಣಿಗೆಯನ್ನು ಕುರಿತು ಗ್ರೋತ್ ಆಫ್ ಎ ಪ್ಲ್ಯಾಂಟ್ ಎಂಬ ಪುಟ್ಟ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ. ಇದು ಭಾರತದ ಮೊದಲ ಶೈಕ್ಷಣಿಕ ಸಾಕ್ಷ್ಯಚಿತ್ರ. 1913ರ ಮೇ 3ರಂದು ಇವನ ಮೊದಲ ಚಿತ್ರ (ಭಾರತೀಯ ಮೊದಲ ಚಿತ್ರ) ರಾಜಾಹರಿಶ್ಚಂದ್ರ ಮುಂಬಯಿಯ ಕಾರೋನೇಶನ್ ಸಿನಿಮಾ ಮಂದಿರದಲ್ಲಿ ತೆರೆಕಂಡು ಜಗತ್ತಿನ ಅತಿದೊಡ್ಡ ಚಿತ್ರೋದ್ಯಮಕ್ಕೆ ಬುನಾದಿ ಹಾಕಿದಂತಾಯಿತು. 3.700 ಅಡಿ ಉದ್ದದ 50 ನಿಮಿಷಗಳ ಈ ಚಿತ್ರ ಬರಹದಿಂದ ತೆರೆಯವರೆಗೆ ಏಕವ್ಯಕ್ತಿಕೃತ. ಹರಿಶ್ಚಂದ್ರನ ಪಾತ್ರವನ್ನು ಡಿ.ಡಿ. ಡಾಟ್ಕೆ ಎಂಬ ಭಾರತೀಯ ಪ್ರಥಮ ನಟನೂ, ರೋಹಿತನ ಪಾತ್ರವನ್ನು ಫಾಲ್ಕೆಯ ಮಗ ಬಾಲಚಂದ್ರನೂ ಅಭಿನಯಿಸಿದ್ದರು. ಸ್ತ್ರೀ ಪಾತ್ರಗಳನ್ನು ಅಭಿನಯಿಸಲು ವೇಶ್ಯೆಯರೂ ನಿರಾಕರಿಸಿದ ಮೇಲೆ ಸಾಳುಂಕೆ ಎಂಬ ಕೋಮಲಕಾಯದ ಯುವಕನೇ ತಾರಾಮತಿಯ ಪಾತ್ರ ನಿರ್ವಹಿಸಿದ. ಈ ಚಿತ್ರದ ಅದ್ಭುತ ಯಶದ ಸ್ಛೂರ್ತಿಯಿಂದಾಗಿ 1913ರಿಂದ 1931ರವರೆಗೆ ಕಾಲು ಶತಮಾನದ ಕಾಲದಲ್ಲಿ ಫಾಲ್ಕೆ ಸುಮಾರು 125 ಮೂಕಚಿತ್ರಗಳನ್ನು ನಿರ್ಮಿಸಿದ. ಕಥಾಚಿತ್ರಗಳಲ್ಲದೆ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ. ಮೊದಲ ವಿಜ್ಞಾನಚಿತ್ರ, ಮೊದಲ ಶೈಕ್ಷಣಿಕ ಚಿತ್ರ, ಮೊದಲ ಕಾಲಿಕ ಚಿತ್ರ (ಪೌರ ಚುನಾವಣೆಗಳು 1929) ಭಾರತೀಯ ಚಿತ್ರ ಜಗತ್ತಿಗೆ ಇವನ ಕಾಣಿಕೆ. ಆಗಿನ ಕಾಲದ ಇತರ ನಿರ್ಮಾಪಕರಂತೆ ಈತನೂ ಸ್ವತಃ ಪ್ರದರ್ಶಕನಾಗಿ ಜೋಡೆತ್ತಿನ ಗಾಡಿಗಳ ಮೇಲೆ ಪ್ರೊಜೆಕ್ಟರ್, ತೆರೆ ಹಾಗೂ ಚಿತ್ರಗಳನ್ನು ಊರಿಂದೂರಿಗೆ ಒಯ್ಯುತ್ತಿದ್ದ. ಭಾರತದ ಎಲ್ಲ ಕಡೆಗಳಲ್ಲಿ ಇವನ ಚಿತ್ರಗಳು ಜನಪ್ರಿಯವಾದುವು. ಕೊಲಂಬೊದಿಂದ ರಂಗೂನಿನವರೆಗೂ ಇವನ ಖ್ಯಾತಿ ಹರಡಿತು. ರಾಜಾ ಹರಿಶ್ಚಂದ್ರ ಚಿತ್ರ ತೆರೆಗೆ ಬಂದ ಮುಂದಿನ ನಾಲ್ಕು ವರ್ಷಗಳ ಕಾಲ ಇಡೀ ಭರತಖಂಡದಲ್ಲಿದ್ದ ಏಕೈಕ ನಿರ್ಮಾಪಕನೆಂದರೆ ಇವನೇ ಮೊದಲ ಚಿತ್ರ ತಯಾರಿಕೆಯ ಆನಂದರ ನಾಸಿಕವನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡ. ಇವನ ಕುಟುಂಬವೆಂದರೆ ಪತ್ನಿ ಸರಸ್ವತಿ (ಕಾಕಿ), ಐವರು ಗಂಡುಮಕ್ಕಳು, ಮೂವರು ಹೆಣ್ಣು ಮಕ್ಕಳು. ಎಲ್ಲ ಮಕ್ಕಳೂ ಒಂದಲ್ಲ ಒಂದು ಫಾಲ್ಕೆ ಚಿತ್ರದಲ್ಲಿ ಪಾತ್ರ ವಹಿಸಿದವರೇ. ಇವನ ಚಿತ್ರ ಕಂಪನಿಯ ಸದಸ್ಯರ ಸಂಖ್ಯೆ ನೂರರವರೆಗಿತ್ತು. ಎಲ್ಲರೂ ಒಂದೇ ಸ್ಥಳದಲ್ಲಿ ಏಕ ಕುಟುಂಬದವರಂತೆ ವಾಸಿಸುತ್ತಿದ್ದರು. ಸಾಮಾನ್ಯವಾಗಿ ಹೊರಗಿನವರನ್ನು ಚಿತ್ರ ನಿರ್ಮಾಣದಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ. ಚಿತ್ರ ನಿರ್ಮಾಣವನ್ನು ಸಂಸ್ಥೀಕರಿಸುವ ಈ ಪದ್ಧತಿಯೇ ಮುಂದೆ ಹಲವು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ರೂಢವಾಯಿತು. ನಿಷ್ಠಾವಂತ ಶಿಸ್ತುಗಾರನೂ ಶ್ರಮಜೀವಿಯೂ ಆದ ಫಾಲ್ಕೆ ಕುಳ್ಳು ಆಕಾರದ ನಿರಹಂಕಾರಭಾವದ ಚುರುಕಿನ ವ್ಯಕ್ತಿ. ಚಿತ್ರಕಥೆಯ ಬರಹ, ನೆಗೆಟಿವ್ ಸಂಸ್ಕಾರ, ಉಡುಗೆಗಳ ವಿನ್ಯಾಸ, ನಿರ್ದೇಶನ, ಛಾಯಾಗ್ರಹಣ, ಚಿತ್ರಸಂಸ್ಕರಣ ಸಂಕಲನ, ಪ್ರಚಾರ, ಪ್ರೊಜೆಕ್ಷನ್ ವಿತರಣೆ ಎಲ್ಲದರ ನಿರ್ವಹಣೆಯನ್ನೂ ಆರಂಭದಲ್ಲಿ ತಾನು ಒಬ್ಬನೇ ಮಾಡುತ್ತಿದ್ದ. ಚಿತ್ರಗಳಲ್ಲಿ ವಿಶೇಷ ಪ್ರಭಾವಗಳನ್ನು ಮೂಡಿಸುವುದರಲ್ಲೀತ ನಿಷ್ಣಾತ. ತಾಂತ್ರಿಕ ಮಟ್ಟದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ. ಇದಕ್ಕೆಲ್ಲ ಇವನ ಮ್ಯಾಜಿಕ್ ಪ್ರತಿಭೆ ಅಪಾರ ನೆರವು ನೀಡಿತು.			(ಎ.ಆರ್.ಎ)

	ಇವನ ಎರಡನೆಯ ಚಿತ್ರ ಭಸ್ಮಾಸುರ ಮೋಹಿನಿಯಲ್ಲಿ ಮುಖ್ಯಪಾತ್ರ ವಹಿಸಲು ಕಮಲಾ ಎಂಬ ಮಹಿಳೆಗೆ ತರಬೇತಿ ನೀಡಿ ತೆರೆಗೇರಿಸಲಾಯಿತು. ಕಾಳೀಯ ಮರ್ದನದಲ್ಲಿ ಇವನ ಮಗಳು ಮೃಣಾಲಿನಿ ಕೃಷ್ಣನ ಪಾತ್ರಧಾರಿ. 1920ರ ವೇಳೆಗೆ ಇವನ ಕಂಪೆನಿಯಲ್ಲಿ ಹಲವು ಸ್ತ್ರೀಯರಿದ್ದರು. 1917ರಲ್ಲಿ ರಾಜಾ ಹರಿಶ್ಚಂದ್ರನ ಪರಿಷ್ಕøತ ಆವೃತ್ತಿ ತೆರೆಕಂಡಿತು. ಅದೇ ವರ್ಷವೇ ಪ್ರಥಮ ಬಾಕ್ಸ್ ಆಫೀಸ್ ಯಶಸ್ವೀ ಭಾರತೀಯ ಚಿತ್ರ ಲಂಕಾದಹನ ನಿರ್ಮಾಣವಾಯಿತು. ಆಗಿನ ಸಿನಿಮಾ ತಂತ್ರಗಳಲ್ಲಿ ಭಾರತದ ಅಪೂರ್ವ ಸಾಧನೆಯ ಪ್ರತೀಕವಾಗಿತ್ತು ಈ ಚಿತ್ರ. ಇದರಲ್ಲಿ ರಾಮ ಹಾಗೂ ಸೀತೆಯ ಎರಡೂ ಪಾತ್ರಗಳನ್ನು ನಿರ್ವಹಿಸಿದ ಸಾಳುಂಕೆ ಆ ಕಾಲದ ಆದ್ಯಂತ ಜನಪ್ರಿಯ ನಟ (ನಟಿ) ಆಗಿದ್ದ.

	1917ರಲ್ಲಿ ಇನ್ನಿತರ ಐವರು ಪಾಲುದಾರರನ್ನು ಸೇರಿಸಿಕೊಂಡು ಫಾಲ್ಕೆ ಫಿಲ್ಮ್ ಕಂಪನಿಯನ್ನು ಹಿಂದೂಸ್ಥಾನ್ ಫಿಲ್ಮ್ ಕಂಪನಿ ಎಂದು ಪುನಸ್ಸಂಘಟಿಸಲಾಯಿತು. ಇದರ ಮೊದಲ ಚಿತ್ರ ಕೃಷ್ಣ ಜನ್ಮದಲ್ಲಿ ಫಾಲ್ಕೆಯ ಮಗಳು ಮಂದಾಕಿನಿ ತುಂಟು ಹುಡುಗ ಕೃಷ್ಣನ ಪಾತ್ರದಲ್ಲಿ ಅತ್ಯಂತ ಜನಪ್ರಿಯಳಾದಳು. ಕಾಳೀಯಮರ್ದನ, ಅಹಲ್ಯೋದ್ಧಾರ, ಉಷಾಸ್ವಪ್ನ ಚಿತ್ರಗಳು 1919ರಲ್ಲಿ ತೆರಕಂಡವು. 1919ರ ವೇಳೆಗೆ 16 ಸಾಕ್ಷ್ಯಚಿತ್ರಗಳು ನಿರ್ಮಾಣವಾದುವು. ಬೆಂಕಿಕಡ್ಡಿ, ನಾಣ್ಯಗಳು, ಇತ್ಯಾದಿ ಈ ಚಿತ್ರಗಳ ವಿಷಯಗಳು. 1917ರಲ್ಲಿ ಹೌ ಫಿಲ್ಮ್ಸ್ ಆರ್ ಮೇಡ್ ಎಂಬ ಚಿತ್ರದಲ್ಲಿ ತನ್ನ ಅನುಭವಗಳನ್ನೇ ಫಾಲ್ಕೆ ಚಿತ್ರೀಕರಿಸಿದ. ಪ್ರೊಫೆಸರ್ ಕೆಲ್ಭಾ ಮ್ಯಾಜಿಕ್ ಎಂಬ ಸಣ್ಣ ಸಾಕ್ಷ್ಯ ಚಿತ್ರದಲ್ಲಿ ತಾನೇ ಮ್ಯಾಜಿಕ್‍ಗಾರನ ಪಾತ್ರವಹಿಸಿದ. ಕೆಲ್ಭಾ ಎನ್ನುವುದು ಇವನ ಹೆಸರಿನ ತಿರುಗುಮುರುಗು.

	1919ರಲ್ಲಿ ಫಾಲ್ಕೆ ತಮ್ಮ ಮೂರು ಚಿತ್ರಗಳೊಡನೆ ಇಂಗ್ಲೆಂಡ್ ಪ್ರವಾಸ ಮಾಡಿ ಅಲ್ಲಿಯ ಚಿತ್ರವಲಯದ ಗಮನ ಸೆಳೆದ. ವಾರ್ನರ್ ಬ್ರದರ್ಸ್ ವಿತರಣ ಸಂಸ್ಥೆ ಈತನ ಚಿತ್ರಗಳ 200 ಪ್ರತಿಗಳಿಗೆ ಬೇಡಿಕೆ ಸಲ್ಲಿಸಿತು. ಲಂಡನ್ನಿನ ಎರಡು ಸ್ಟುಡಿಯೋದವರು ಭಾರತೀಯ ವಸ್ತುಗಳನ್ನು ಆಧರಿಸಿದ ಚಿತ್ರಗಳನ್ನು ಇಂಗ್ಲೆಂಡಿನಲ್ಲಿ ನಿಂತು ತಮಗೆ ನಿರ್ಮಿಸಿ ಕೊಡಲು ಆಹ್ವಾನಿಸಿದರು. ಇದರಿಂದ ಹಣದ ಜೊತೆಗೆ ಅಂತರರಾಷ್ಟ್ರೀಯ ಖ್ಯಾತಿ ಈತನದಾಗುತ್ತಿತ್ತು. ಆದರೆ ಸ್ವದೇಶಿ ಚಳವಳಿಯ ಆದರ್ಶದಿಂದ ಪ್ರೇರಿತನಾಗಿ ಆಹ್ವಾನವನ್ನು ನಿರಾಕರಿಸಿ, ಸ್ವದೇಶಿ ಪ್ರತಿಭೆ, ಸ್ವದೇಶಿ ಬಂಡವಾಳದಿಂದಲೇ ಚಿತ್ರನಿರ್ಮಿಸುವ ನಿರ್ಧಾರದಿಂದ ಈತ ಭಾರತಕ್ಕೆ ಹಿಂದಿರುಗಿದ.

	ಆಮೇಲೆ ಫಾಲ್ಕೆ ಪಾಲುದಾರರೊಂದಿಗೆ ಮನಸ್ತಾಪ ಬಂದು 1920-21ರಲ್ಲಿ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರವಾಗಿ ಕಾಶಿಯಲ್ಲಿ ಹೋಗಿ ನೆಲೆಸಿದ. ಎರಡು ವರ್ಷಗಳ ಅವಧಿಯಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿ 7 ಅಂಕಗಳ ರಂಗಭೂಮಿ ಎಂಬ ನಾಟಕವನ್ನು ರೂಪಿಸಿದ. ಚಿತ್ರರಂಗದ ವ್ಯಕ್ತಿಗಳ ವಿಡಂಬನೆ ಇದರ ವಸ್ತು. ಮತ್ತೆ ನಾಸಿಕಕ್ಕೆ ಮರಳಿ ಚಿತ್ರೋದ್ಯಮದಲ್ಲಿ ನಿರತನಾದ. ಪುರಾಣ ವಸ್ತುವಿನ ಕಥಾಚಿತ್ರಗಳು ಪ್ರಾಶಸ್ತ್ಯ ಪಡೆದ ಅಂದಿನ ದಿನಗಳಲ್ಲಿ ಫಾಲ್ಕೆಗೆ ಸರಿಸಾಟಿಯಾದವರು ಯಾರೂ ಇರಲಿಲ್ಲ. ಇಪ್ಪತ್ತರ ದಶಕದಲ್ಲಿ ಸಾಮಾಜಿಕ ಚಿತ್ರಗಳದ್ದು ಮೇಲುಗೈಯಾಗಿ ಅನಂತರ ಸ್ಟೆಂಟ್ ಸಾಹಸ ಚಿತ್ರಗಳು ಜನಪ್ರಿಯವಾಗ ತೊಡಗಿದಾಗ ಫಾಲ್ಕೆ ಚಿತ್ರಗಳ ಬೇಡಿಕೆ ಇಳಿಮುಖವಾಯಿತು.
	ಲೈಫ್ ಆಫ್ ಲಾರ್ಡ್ ಬುದ್ಧ ಎಂಬ ಐತಿಹಾಸಿಕ ಧಾರ್ಮಿಕ ಚಿತ್ರವನ್ನು ಫಾಲ್ಕೆ ನಿರ್ದೇಶಿಸಿದ. ಮಹಾನಂದ ಚಿತ್ರದಲ್ಲಿ ಪುರಾಣವಸ್ತುವಿಗೆ ಸಾಮಾಜಿಕ ವೇಷತೊಡಿಸುವ ಪ್ರಯತ್ನ ಮಾಡಿದ. 1927ರಲ್ಲಿ ಹಿಂದೂಸ್ಥಾನ್ ಫಿಲ್ಮ್ ಕಂಪನಿಯಿಂದ ನಿವೃತ್ತನಾದ. ಆದರೂ ಚಿತ್ರ ನಿರ್ಮಾಣಾಕರ್ಷಣೆ ಇವನನ್ನು ಬಿಡಲಿಲ್ಲವಾಗಿ 1931ರಲ್ಲಿ ಮತ್ತೆ ಸೇತುಬಂಧನ ಚಿತ್ರವನ್ನು ನಿರ್ಮಿಸಿದ. ವಾಕ್ಚಿತ್ರ ಕಾಲಿಡುತ್ತಿದ್ದ ಹೊಸತರಲ್ಲಿ ಮೂಕಚಿತ್ರ ಸರಿಹೋಗದೆಂದು ಬಗೆದು ಅವಕ್ಕೆ ಸಂಭಾಷಣೆಗಳನ್ನು ಜೋಡಿಸುವ ಪ್ರಯತ್ನ ಮಾಡಿದ. ಭಾರತದಲ್ಲಿ ನಡೆದ ಇಂಥ ಮೊದಲ ಪ್ರಯತ್ನ ಇದು. ಗಂಗಾವತರಣ (1937) ವಾಕ್ಚಿತ್ರ ಈತ ನಿರ್ಮಿಸಿದ ಕೊನೆಯಚಿತ್ರ.

	ತೀವ್ರ ಬಡತನದಲ್ಲಿ ನೊಂದು 1944 ಫೆಬ್ರುವರಿ 16ರಲ್ಲಿ ನಿಧನ ಹೊಂದಿದಾಗಿ ಚಿತ್ರರಂಗ ಹಾಗೂ ಜನತೆಯ ಪಾಲಿಗೆ ಈತ ಮರತೇ ಹೋದಂತಾಗಿದ್ದ.

	1971ರ ಏಪ್ರಿಲ್‍ನಲ್ಲಿ ಈತನ ಶತಮಾನೋತ್ಸವವನ್ನು ಆಚರಿಸಲಾಯಿತು. ಗೌರವಾರ್ಥ ಅಂಚೆಚೀಟಿ ಬಿಡುಗಡೆ ಮಾಡಲಾಯಿತು. ದಾದರ್‍ನಲ್ಲಿರುವ ಇವನ ಹೆಸರಿನ ಬೀದಿಯಲ್ಲಿ ಇವನ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಲಾಗಿದೆ; ಸ್ಮರಣ ಸಂಚಿಕೆಯನ್ನು ತರಲಾಗಿದೆ.

	ಫಾಲ್ಕೆ ಪ್ರಶಸ್ತಿ: ಚಿತ್ರರಂಗದ ಪಿತಾಮಹ ಫಾಲ್ಕೆಯ ನೆನಪಿನಲ್ಲಿ ಭಾರತ ಸರ್ಕಾರ 1970ರಲ್ಲಿ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಎಂಬ ಪ್ರಶಸ್ತಿಯನ್ನು ಸ್ಥಾಪಿಸಿತು. ಚಿತ್ರೋದ್ಯಮದಲ್ಲಿ ಸಲ್ಲಿಸಿರುವ ವಿಶಿಷ್ಟ ಹಾಗೂ ಅಮೋಘ ಸೇವೆಗಾಗಿ ಭಾರತೀಯ ಚಿತ್ರರಂಗದ ವ್ಯಕ್ತಿಗಳಿಗೆ ಸಲ್ಲುವ ಅತ್ಯುನ್ನತ ಗೌರವ ಇದು. ಇದನ್ನು ಪಡೆದವರಿಗೆ 11,000 ರೂಪಾಯಿಗಳ ನಗದು, ಪ್ರಶಸ್ತಿ ಫಲಕ ಹಾಗೂ ಶಾಲು ಸನ್ಮಾನ ನೀಡಲಾಗುವುದು. ಇಲ್ಲಿಯವರೆಗೆ ಹತ್ತು ಮಂದಿ ಖ್ಯಾತರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ದೇವಿಕಾರಣಿ (1970), ಬೀರೇಂದ್ರನಾಥ ಸರ್ಕಾರ್ (1971), ಪ್ರಥ್ವೀರಾಜ್ ಕಪೂರ್ (1972), ಪಂಕಜಮಲಿಕ್ (1973), ಸುಲೋಚನ (1974) ಬಿ.ಎನ್.ರೆಡ್ಡಿ (1975), ಧೀರೇನ್ ಗಂಗೂಲಿ (1976), ಕಾನನ್ ದೇವಿ (1977), ನಿತಿನ್‍ಬೋಸ್ (1978), ಆರ್.ಸಿ. ಬೋರಾಲ್ (1979).

	ಮುಂಬಯಿಯ ಅತ್ಯಂತ ಕ್ರಿಯಾಶೀಲ ಫಿಲ್ಮ್ ಸೊಸೈಟಿಯಾದ ಫಿಲ್ಮ್ ಪೋರಮ್ ಕೂಡ ಒಂದು ದಾಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ನೀಡುತ್ತದೆ. ಭಾರತದ ಯಾವುದೇ ಭಾಷೆಯ ನಿರ್ದೇಶಕನ ಮೊದಲ ಚಿತ್ರ ಆ ವರ್ಷ ಅತ್ಯುತ್ತಮವೆಂದು ಪರಿಗಣಿಸಲಾದರೆ ಅವನಿಗೆ ಈ ಪ್ರಶಸ್ತಿ. ಅಂದರೆ ಈ ಪ್ರಶಸ್ತಿಯನ್ನು ಒಂದು ಸಲ ಮಾತ್ರ ಗೆಲ್ಲುವುದು ಸಾಧ್ಯ. ಫಲಕದ ಜೊತೆಗೆ 2,000 ರೂ. ಗಳ ನಗದು ಬಹುಮಾನ. ಇದನ್ನು ಪಡೆದಿರುವವರು-1971ರಲ್ಲಿ ಪಟ್ಟಾಭಿರಾಮರೆಡ್ಡಿ (ಸಂಸ್ಕಾರ), 1972ರಲ್ಲಿ ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ.ಕಾರಂತ್ (ವಂಶವೃಕ್ಷ), 1973ರಲ್ಲಿ ಕುಮಾರ್ ಸಹಾನಿ (ಮಾಯಾದರ್ಪಣ), 1974ರಲ್ಲಿ ಎಂ.ಟಿ. ವಾಸುದೇವನ್‍ನಾಯರ್ (ನಿರ್ಮಾಲ್ಯಂ), 1975ರಲ್ಲಿ ಶ್ಯಾಮ್ ಬೆನಗಲ್ (ಅಂಕುರ್), 1976ರಲ್ಲಿ ಆರ್.ಎಸ್. ಶುಕ್ಲಾ (ಮೃಗತೃಷ್ಣಾ).										  (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ